ಮಿಲ್ಟನ್, ಡ್ರೈಡನ್ ಇಬ್ಬರೂ ಗದ್ಯ ಲೇಖಕರೂ ಆಗಿದ್ದರು. ತನ್ನ ಕಾಲದ ರಾಜಕೀಯ ಸಾಮಾಜಿಕ ವಿಚಾರಗಳಿಗೆ ಸಂಬಂಧಪಟ್ಟ ಗದ್ಯಕೃತಿಗಳನ್ನು ಮಿಲ್ಟನ್ ಬರೆದ. ಏರಿಯೋಪ್ಯಾಜಿಟಿಕ ಎಂಬ ಅವನ ಪ್ರಸಿದ್ಧ ಗದ್ಯಪ್ರಬಂಧ ಅಭಿಪ್ರಾಯ ಸ್ವಾತಂತ್ರ್ಯದ ಸಮರ್ಥನೆ. ಅವನ ಕಾವ್ಯಗಳಲ್ಲಿರುವಂತೆ ಗದ್ಯಕೃತಿಗಳಲ್ಲೂ ಒಂದು ಭವ್ಯತೆ, ಶಬ್ದವೈಭವ, ಔನ್ನತ್ಯಗಳು ಎದ್ದು ಕಾಣುತ್ತವೆ. ಡ್ರ್ಯೆಡನ್ ಆಧುನಿಕ ಇಂಗ್ಲಿಷ್ ಗದ್ಯದ ಪಿತಾಮಹನೆನ್ನಿಸಿಕೊಂಡಿದ್ದಾನೆ. ಅವನ ಗದ್ಯವೆಲ್ಲ ವಿಮರ್ಶಾತ್ಮಕ ಲೇಖನಗಳ ರೂಪವನ್ನು ತಳೆದಿದೆ. ಅವನ ವಿಮರ್ಶೆ ವಿಶಾಲಮನಸ್ಸಿನಿಂದಲೂ ಕಾವ್ಯಪ್ರಜ್ಞೆಯಿಂದಲೂ ಪ್ರೇರಿತವಾದುದು. ಇಂಗ್ಲಿಷ್ ವಿಮರ್ಶೆಯ ಪಿತಾಮಹನೆಂದೂ ಆತ ಹೆಸರು ಗಳಿಸಿದ್ದಾನೆ. ಅವನ ಶೈಲಿ ಸಂದರ್ಭಾನುಸಾರ ಆಡುಮಾತನ್ನೂ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ಬಂದ ಪದಗಳನ್ನೂ ಉಪಯೋಗಿಸಿಕೊಂಡು ಪರಿಣಾಮಕಾರಿಯಾಗಬಲ್ಲದು. ಮಿಡ್ಲ್ ಸ್ಟೈಲ್ ಎಂಬ ಹೆಸರು ಇದಕ್ಕೆ ಸಾರ್ಥಕವಾಗಿದೆ. ಸರಳವಾದ ಭಾಷಾಪ್ರಯೋಗಕ್ಕೆ ಹೆಸರಿಸಬೇಕಾದುದು ಇದೇಕಾಲದ ಜಾನ್ ಬನ್ಯನ್ನನ ಪಿಲಿಗ್ರಿಮ್ಸ್ ಪ್ರೋಗ್ರೆಸ್ ಎಂಬ ರೂಪಕಕಥೆ.

ಆದರೆ ಮಿಲ್ಟನ್ ಮತ್ತು ಡ್ರೈಡನ್ನರಿಗೆ ಮೊದಲೇ 17ನೆಯ ಶತಮಾನದಲ್ಲಿ ಇತರ ಪ್ರಮುಖ ಗದ್ಯಲೇಖಕರು ಕೆಲವರಿದ್ದರು. ಎಲಿಜಬೆತ್ ಯುಗಕ್ಕೆ ಸೇರಿದ ಇತರ ಗದ್ಯ ಲೇಖಕರಲ್ಲಿ ರಿಚರ್ಡ್ ಹೂಕರ್ನ ಎಕ್ಲೆಸಿಯಾಸ್ಟಿಕಲ್ ಪಾಲಿಟಿ ಕ್ರೈಸ್ತಮಠದ ಆಡಳಿತ ವ್ಯವಸ್ಥೆಯನ್ನು ಕುರಿತದ್ದು. ಅದು ಗಂಭೀರವಾದ ಗದ್ಯ ಶ್ಯೆಲಿಗೆ ಪ್ರಸಿದ್ಧವಾಗಿದೆ. ಆನಂತರ ಬಂದ ಗದ್ಯಲೇಖಕರಲ್ಲಿ ಫ್ರಾನ್ಸಿಸ್ ಬೇಕನ್ ಗಣ್ಯನಾದವ. ದಿ ಅಡ್ವಾನ್ಸ್ಮೆಂಟ್ ಆಫ್ ಲರ್ನಿಂಗ್ ಮತ್ತು ಎಸ್ಸೇಸ್ ಎಂಬ ಕವನ ಬರಹಗಳು ಖ್ಯಾತಿವೆತ್ತಿವೆ. ಅವನ ಪ್ರಬಂಧಗಳು ಇಂಗ್ಲಿಷ್ನಲ್ಲಿ ಆ ಜಾತಿಯ ಮೊಟ್ಟಮೊದಲನೆಯ ಕೃತಿಗಳು. ಎಸ್ಸೆ ಎಂಬ ಪದವನ್ನು ಇಂಗ್ಲಿಷಿಗಿತ್ತವನೂ ಅವನೇ. ಲೌಕಿಕವಾಗಿ ಊರ್ಜಿತವಾಗುವುದು ಹೇಗೆ ಎನ್ನುವುದೇ ಬೇಕನ್ನ ಪ್ರಮುಖ ಆಸಕ್ತಿಯಾಗಿತ್ತು. ಇತರರಿಗೂ ಅವನು ಅದನ್ನೇ ಬೋಧಿಸಿದ. ಅವನ ಗದ್ಯ ಬಿಗಿಯಾದ ಅಡಕವಾದ ವಾಕ್ಯಗಳಿಂದ ಕೂಡಿ ಆಲೋಚನಾಭರಿತವಾಗಿದೆ. ಬೇಕನ್ನ ಗದ್ಯಕೃತಿಗಳು 17ನೆಯ ಶತಮಾನದ ಮೊದಲ ದಶಕಕ್ಕೆ ಸೇರಿದ ಬರೆಹಗಳು. ಇದೇ ದಶಕದಲ್ಲಿ ಬಂದುದು ಇಂಗ್ಲಿಷ್ ಗದ್ಯ ಕೃತಿಗಳಲ್ಲೆಲ್ಲ ಅತ್ಯಂತ ಪ್ರಭಾವಯುತವಾದ ಬ್ಯೆಬಲಿನ ಭಾಷಾಂತರ ದಿ ಆಥರೈಸ್ಡ್ ವರ್ಷನ್, ಸರಳವೂ ಸುಂದರವೂ ಕಾವ್ಯಮಯವೂ ಆದ ಈ ಪುಸ್ತಕ ಇಂಗ್ಲಿಷ್ ಲೇಖಕರನೇಕರ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಲ್ಲದೆ ಇಂಗ್ಲಿಷ್ ಭಾಷೆಯನ್ನು ಸ್ತಿಮಿತಗೊಳಿಸುವುದರಲ್ಲೂ ದೊಡ್ಡ ಉಪಕಾರ ಮಾಡಿದೆ.

17ನೆಯ ಶತಮಾನದ ಇತರ ಗದ್ಯಲೇಖಕರು ರಾಬರ್ಟ್ ಬರ್ಟನ್, ಥಾಮಸ್ ಫುಲ್ಲರ್, ಜೆರೆಮಿ ಟೇಲರ್, ಐಜಾ಼ಕ್ ವಾಲ್ಟನ್, ಸರ್ ಥಾಮಸ್ ಬ್ರೌನ್, ಸ್ಯಾಮ್ಯುಯಲ್ ಪೀಪ್ಸ್, ಥಾಮಸ್ ಹಾಬ್ಸ್ ಮತ್ತು ಜಾನ್ ಲಾಕ್. ಬರ್ಟನ್ನನ ದಿ ಅನಾಟಮಿ ಆಫ್ ಮೆಲಂಕಲಿ, ಫುಲ್ಲರನ ಇಂಗ್ಲಿಷ್ ವರ್ದೀಸ್. ಟೇಲರನ ಹೋಲಿ ಲಿವಿಂಗ್ ಅಂಡ್ ಹೋಲಿ ಡ್ಯೆಯಿಂಗ್, ವಾಲ್ಟನ್ನನ ದಿ ಕಂಪ್ಲೀಟ್ ಆಂಗ್ಲರ್, ಬ್ರೌನನ ರಿಲಿಜಯೋ ಮೆಡಿಚಿ ಮತ್ತು ಆರ್ನ್ ಬರಿಯಲ್, ಪೀಪ್ಸನ ಡಯರಿ, ಹಾಬ್ಸನ ಲೆವಿಯತಾನ್ ಮತ್ತು ಲಾಕ್ನ ಎಸ್ಸೆ ಆನ್ ಹ್ಯೂಮನ್ ಅಂಡರ್ಸ್ಟ್ಯಾಂಡಿಂಗ್ ಮುಂತಾದವುಗಳ ಗ್ರಂಥಗಳು ಇಂಗ್ಲಿಷ್ ಸಾಹಿತ್ಯಚರಿತ್ರೆಯಲ್ಲಿ ಮೈಲಿಗಲ್ಲುಗಳು.
ಡ್ರೈಡನ್, ಪೀಪ್ಸ್, ಹಾಬ್ಸ್, ಲಾಕ್ ಇವರೆಲ್ಲ 17ನೆಯ ಶತಮಾನದ ಕೊನೆಯ ನಲವತ್ತು ವರ್ಷಗಳಾದ ರೆಸ್ಟೊರೇಷನ್ ಏಜ್ ಎಂಬ ಅವಧಿಗೆ ಸೇರಿದವರು. ಈ ಯುಗ ಇಂಗ್ಲಿಷ್ ಗದ್ಯದ ಚರಿತ್ರೆಯಲ್ಲಿ ಮಾತ್ರವಲ್ಲದೆ, ನಾಟಕದ ಚರಿತ್ರೆಯಲ್ಲೂ ಪ್ರಸಿದ್ಧವಾಗಿದೆ. ಅಂದು ನಾಟಕ ನೋಡುವುದಕ್ಕೆ ಹೋಗುತ್ತಿದ್ದವರನೇಕರು ಸಮಾಜದ ಮೇಲ್ತರಗತಿಗೆ ಸೇರಿದ್ದವರು. ರಾಜ 2ನೆಯ ಚಾಲ್ರ್ಸ್ನ ಸಮೀಪವರ್ತಿಗಳು. ಅವನೂ ಅವನ ಅನುಚರರೂ ಅನೀತಿಗೆ ಅತಿಭೋಗಕ್ಕೆ ಹೆಸರಾಗಿದ್ದವರು. ಈ ದೋಷಗಳೇ ಪ್ರಧಾನವಾಗಿರುವ ಗದ್ಯನಾಟಕಗಳು ಈ ಅವಧಿಯಲ್ಲಿ ಬಂದವು. ರೆಸ್ಟೋರೇಷನ್ ನಾಟಕವೆಂದರೆ ಅನೀತಿಯುತ ವಾದುದೆನ್ನುವಷ್ಟರಮಟ್ಟಿಗೆ ಅವುಗಳಲ್ಲಿ ಕೆಲವು ಅಪಖ್ಯಾತಿಯನ್ನು ಪಡೆದಿವೆ. ಅವುಗಳಲ್ಲಿ ಕೆಲವು ಸರ್ ಜಾರ್ಜ್ ಎತಿರೆಜ್, ವಿಲಿಯಂ ವೈಚರ್ಲಿ, ಮಿಸೆಸ್ ಆಫ್ರಾಬೆನ್ ಮತ್ತು ವಿಲಿಯಂ ಕಾಂಗ್ರೀವ್ರವರ ನಾಟಕಗಳು ಇಂಥವು. ವೈಚರ್ಲಿಯ ದಿ ಕಂಟ್ರಿ ಹೌಸ್ ಇದಕ್ಕೆ ಒಳ್ಳೆಯ ಉದಾಹರಣೆ, ಕಾಂಗ್ರೀವ್ನ ದಿ ವೆ ಆಫ್ ದಿ ವಲ್ರ್ಡ್ ಇಂಗ್ಲಿಷಿನ ಅತ್ಯಂತ ಪ್ರಸಿದ್ಧವಾದ ನಾಟಕಗಳಲ್ಲೊಂದು. ಇದರ ಗದ್ಯದ ಸೊಬಗು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕಗಳೂ 17ನೆಯ ಶತಮಾನದ ಆದಿಯಲ್ಲಿ ಬಂದ ವ್ಸಾನ್ ಬ್ರೂ ಮತ್ತು ಫರ್ಕುಹರ್ರ ನಾಟಕಗಳೂ ಗದ್ಯ ನಾಟಕಗಳನ್ನು ಇಂಗ್ಲಿಷಿನಲ್ಲಿ ಸ್ಥಾಪಿಸಿದ್ದಲ್ಲದೆ ಕಾಮೆಡಿ ಆಫ್ ಮ್ಯಾನರ್್ಸ ವರ್ಗದ ನಾಟಕಕ್ಕೂ ಹಿರಿ ಸ್ಥಾನವನ್ನು ತಂದುಕೊಟ್ಟವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ